ಪಗಡೆ ಮರ -
	ಸಪೋಟೇಸೀ ಕುಟುಂಬಕ್ಕೆ ಸೇರಿದ ಮಧ್ಯಮಗಾತ್ರದ ನಿತ್ಯಹರಿದ್ವರ್ಣದ ಮರ. ಮಿಮ್ಯುಸಾಪ್ಸ್ ಎಲೆಂಜಿ ಇದರ ಶಾಸ್ತ್ರೀಯ ನಾಮ. ಭಾರತ ಮತ್ತು ಮಲಯ ಪ್ರದೇಶ ಇದರ ತವರು.

	ಇದು 10-20 ಮೀ. ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ಬಲು ಗಟ್ಟಿ. ಎಲೆಗಳು ಸರಳ ಹಾಗೂ ಒರಟು. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಕಾಂಡದಲ್ಲಿ ಹಾಲ್ನೊರೆ (ಲೇಟೆಕ್ಸ್)ಉಂಟು. ಹೂಗಳು ದ್ವಿಲಿಂಗಿಗಳು, ಪ್ರತಿ ಹೂವಿನಲ್ಲಿ 8 ಪುಷ್ಪ ಪತ್ರಗಳು, 18-24 ದಳಗಳು, 8 ಕೇಸರಗಳು, 8 ಕಾರ್ಪೆಲುಗಳಿಂದ ರಚಿತವಾದ ಉಚ್ಚಸ್ಥಾನದ ಅಂಡಾಶಯ ಇವೆ. ಪತ್ರಗಳೂ ದಳಗಳೂ ತಲಾ ಎರಡು ಆವರ್ತಗಳಲ್ಲಿ ಜೋಡಣೆಗೊಂಡಿವೆ. ದಳಗಳ ಬಣ್ಣ ಮಾಸಲು ಬಿಳಿ. ಅಲ್ಲದೆ ಅವು ಸುವಾಸನಾಯುಕ್ತವಾಗಿವೆ. ಅಂಡಕೋಶದಲ್ಲಿ ಕಾರ್ಪೆಲ್ ಸಂಖ್ಯೆಗೆ ಸಮನಾದ ಸಂಖ್ಯೆಯ ಕೋಣೆಗಳಿವೆ. ಒಂದೊಂದು ಕೋಣೆಯಲ್ಲಿ ಒಂದೊಂದೇ ಅಂಡಕವುಂಟು. ಫಲ ಹಳದಿ ಬಣ್ಣದ ಬೆರಿ.

	ಪಗಡೆಮರವನ್ನು ಇದರ ಸುವಾಸನಾಯುಕ್ತ ಹೂವಿಗಾಗಿ ಅಲಂಕಾರ ಸಸ್ಯವಾಗಿ ಹೂದೋಟಗಳಲ್ಲಿ ಬೀಜಗಳ ಮೂಲಕ ಬೆಳೆಸುವುದುಂಟು. ಇದರ ಹಣ್ಣನ್ನು ತಿನ್ನುವುದುಂಟು. ಮರದಿಂದ ಗೋಂದನ್ನು ಪಡೆಯಬಹುದು, ತೊಗಟೆಯಿಂದ ಬಣ್ಣ ತಯಾರಿಸುವುದಿದೆ. ಬೀಜದಿಂದ ಎಣ್ಣೆ ಸಿಕ್ಕುತ್ತದೆ. ಚೌಬೀನೆ ಮನೆ ಕಟ್ಟಲು, ಗಾಡಿಕಟ್ಟಲು, ಉಪಕರಣಗಳನ್ನು ತಯಾರಿಸಲು ಉಪಯುಕ್ತ. ತೊಗಟೆಗೆ ಪ್ರತಿಬಂಧಕ ಗುಣವಿದ್ದು ಔಷಧೀಯವಾಗಿಯೂ ಉಪಯುಕ್ತವೆನಿಸಿದೆ.
(ಕೆ.ಎನ್.ಜಿ.; ಎಂ.ಎಚ್.ಎಂ.)
ಪರಿಷ್ಕರಣೆ : ಹರೀಶ್ ಭಟ್
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ